Friday, February 4, 2011

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಧನೆ

ಕನ್ನಡ ಸಾಹಿತ್ಯ ಪರಿಷತ್ತು ೬ ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಾರ್ವಭೌಮ ಸಂಸ್ಥೆ. ಇದರ ಅಧ್ಯಕ್ಷರು ರಾಜ್ಯದ ಎಲ್ಲಾ ಪರಿಷತ್ತಿನ ಆಜೀವ ಸದಸ್ಯರಿಂದ ನೇರವಾಗಿ ಆಯ್ಕೆಯಾಗುತ್ತಾರೆ. ಪ್ರತಿ ಜಿಲ್ಲಾ ಘಟಕಕ್ಕೂ ಒಬ್ಬೊಬ್ಬ ಜಿಲ್ಲಾಧ್ಯಕ್ಷರು ಆಯ್ಕೆಯಾಗುತ್ತಾರೆ. ರಾಜ್ಯಾಧ್ಯಕ್ಷರು, ಒಬ್ಬರು ಕೋಶಾಧಿಕಾರಿಗಳು ಮತ್ತು ಇಬ್ಬರು ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುತ್ತಾರೆ. ಪದನಿಮಿತ್ತ ಪದಾಧಿಕಾರಿಗಳನ್ನು ನೇಮಿಸಿಕೊಂಡು ಕೇಂದ್ರ ಕಾರ್ಯಕಾರಿ ಸಮಿತಿ ರೂಪಿತವಾಗುತ್ತದೆ. ಇದೇ ರೀತಿ ಪ್ರತಿ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ಜಿಲ್ಲಾಧ್ಯಕ್ಷರು ರೂಪಿಸಿಕೊಳ್ಳುತ್ತಾರೆ. ಜಿಲ್ಲಾಧ್ಯಕ್ಷರು ತಾಲ್ಲೂಕು ಅಧ್ಯಕ್ಷರುಗಳನ್ನು ಮತ್ತು ಪದಾಧಿಕಾರಿಗಳನ್ನು ನೇಮಿಸಿಕೊಳ್ಳುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾತ್ಮಕ ಸ್ವರೂಪ ಈ ಬಗೆಯದು. ರಾಜ್ಯಾಧ್ಯಕ್ಷರು ಮಹಿಳಾ ಮತ್ತು ಪರಿಶಿಷ್ಟ ಜಾತಿ/ ಪಂಗಡಗಳ ಮೀಸಲಾತಿಯ ಅಭ್ಯರ್ಥಿಗಳನ್ನು ನೇಮಿಸಿಕೊಂಡು ಪ್ರಜಾಪ್ರಭುತ್ವಾತ್ಮಕವಾಗಿ ಪರಿಷತ್ತನ್ನು ನಡೆಸಿಕೊಂಡು ಹೋಗುತ್ತಾರೆ. ರಾಜ್ಯಾಧ್ಯಕ್ಷರಿಗೆ ಮತ್ತು ಕಾರ್ಯಕಾರಿ ಸಮಿತಿಗೆ ಮಾತ್ರ ನೀತಿ ನಿರೂಪಣೆಯ ಅಧಿಕಾರವಿರುತ್ತದೆ. ಸರ್ವಸದಸ್ಯರ ಸಭೆಗೆ ಯಾವುದೇ ಮೂಲಭೂತ ತಿದ್ದುಪಡಿಗಳನ್ನು ಮಾಡುವ ಅಧಿಕಾರವಿರುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತು ೧೯೧೫ ಮೇ ೫ ರಂದು ಸ್ಥಾಪಿತವಾಗಿ ೯೫ ವರ್ಷಗಳಾಗಿದ್ದು ಇದುವರೆಗೆ ೨೨ ಅಧ್ಯಕ್ಷರುಗಳು ಆಗಿ ಹೋಗಿದ್ದಾರೆ. ಈಗಿನ ಡಾ. ನಲ್ಲೂರು ಪ್ರಸಾದ್ ಆರ್.ಕೆ.ರವರು ೨೩ನೆಯ ಅಧ್ಯಕ್ಷರು. ಇವರ ಎರಡು ವರ್ಷಗಳ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಇವರು ತಮ್ಮ ೨೦೦೮ರ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ೧೦ ಅಂಶಗಳ ಭರವಸೆಗಳನ್ನು ವರ್ಷ ತುಂಬುವಷ್ಟರಲ್ಲಿಯೇ ಸಂಪೂರ್ಣವಾಗಿ ಈಡೇರಿಸಿ ಕನ್ನಡಿಗರ ಶ್ಲಾಘನೆಗೆ ಭಾಜನರಾಗಿ ಹರ್ಷ ತಂದಿದ್ದಾರೆ.

೧. ನಿಂತುಹೋಗಿದ್ದ ನಿಘಂಟಿನ ಕೆಲಸವನ್ನು ಪ್ರಾರಂಭಿಸಿ ತೆರೆಸಿ ಸರ್ಕಾರದಿಂದ ೧ ಕೋಟಿ ರೂ.ಗಳ ಅನುದಾನ ಪಡೆದು ೧೦ ಸಾವಿರ ಪುಟಗಳ ೮ ಬೃಹತ್ ಸಂಪುಟಗಳ ನಿಘಂಟನ್ನು ಪುನರ್ ಮುದ್ರಿಸಿ ಪ್ರಕಟಿಸಿದ್ದಾರೆ. ಅವು ಪರಿಷತ್ತಿನಲ್ಲಿ ಮಾರಾಟಕ್ಕೆ ಲಭ್ಯವಿವೆ. ೮ ಸಂಪುಟಗಳ ಬೆಲೆ ೨೮೦೦ ರೂ.ಗಳು ಮಾತ್ರ. ಇಂದಿನ ಮುದ್ರಣದ ವೆಚ್ಚದಲ್ಲಿ ಅತ್ಯಂತ ಕಡಿಮೆ ಬೆಲೆಯೆಂದು ಹೇಳಬಹುದು. ಬಿಡಿ ಪ್ರತಿಗಳು ಸಿಗುವುದಿಲ್ಲ.

೨. ಸಂಶೋಧನಾ ಕೇಂದ್ರ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಹಂಪಿ ವಿಶ್ವವಿದ್ಯಾನಿಲಯದ ಅಂಗೀಕಾರದೊಂದಿಗೆ ಶಾಸನ ಮತ್ತು ಜಾನಪದ ಡಿಪ್ಲೊಮಾ ತರಗತಿಗಳು ನಡೆಯುತ್ತಿದ್ದವು. ಈಗ ಎಂ.ಫಿಲ್, ಪಿಎಚ್.ಡಿ.,ಗಳಿಗೂ ಇಲ್ಲಿ ಅವಕಾಶ ಕಲ್ಪಿಸುವಲ್ಲಿ ಕ್ರಿಯಾಶೀಲವಾಗಿದೆ. ಕಮ್ಮಟ, ಶಿಬಿರಗಳು, ತರಬೇತಿ ತರಗತಿಗಳು ನಡೆಯುತ್ತಿವೆ. ಸರ್ಕಾರ ಸಂಶೋಧನಾ ಕೇಂದ್ರಕ್ಕೂ ೧ ಕೋಟಿ ರೂ.ಗಳ ಅನುದಾನ ನೀಡಿ ಪ್ರೋತ್ಸಾಹಿಸಿದೆ.

೩. ಇಲ್ಲಿಯವರೆಗೆ ಜಿಲ್ಲಾ ಸಮ್ಮೇಳನಗಳು, ಅಖಿಲ ಭಾರತ ಸಮ್ಮೇಳನಗಳು ಮಾತ್ರ ನಡೆಯುತ್ತಿದ್ದವು. ಕಳೆದೆರಡು ವರ್ಷಗಳಲ್ಲಿ ನಾಲ್ಕು ವಿಭಾಗೀಯ ೨ ದಿನಗಳ ಸಮಾವೇಶಗಳು ನಡೆದಿವೆ. ಗುಲ್ಬರ್ಗದಲ್ಲಿ ಜಾನಪದ ಸಮಾವೇಶ , ಧಾರವಾಡದಲ್ಲಿ ಯುವ ಸಮಾವೇಶ, ರಾಮನಗರದಲ್ಲಿ ಮಹಿಳಾ ಸಮಾವೇಶ ಮತ್ತು ಹಾಸನದಲ್ಲಿ ಮಕ್ಕಳ ಸಮಾವೇಶಗಳು ಯಶಸ್ವಿಯಾಗಿ ನಡೆದಿವೆ. ಇವುಗಳಿಗೆ ತಲಾ ೭೫ ಸಾವಿರ ರೂ.ಗಳಂತೆ ೩ ಲಕ್ಷ ರೂ. ನೀಡಲಾಗಿದೆ. ಮೊದಲ ಬಾರಿಗೆ ಪ್ರತಿ ಜಿಲ್ಲೆಗೆ ೫ ಲಕ್ಷ ರೂ.ಗಳಂತೆ ೧.೪೫ ಕೋಟಿ ರೂ.ಗಳನ್ನು ಜಿಲ್ಲಾ ಸಮ್ಮೇಳನಗಳಿಗೆ ನೀಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ೨ ದಿನಗಳ ಸಮ್ಮೇಳನಗಳು ನಡೆದಿವೆ. ಪ್ರತಿ ತಾಲ್ಲೂಕಿಗೆ ೧ ಲಕ್ಷ ರೂ.ಗಳನ್ನು ಸಮ್ಮೇಳನಗಳಿಗಾಗಿ ನೀಡಲಾಗುವುದೆಂಬ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ.

೪. ಗ್ರಾಮಸಿರಿ; ‘ಹಳ್ಳಿಯೆಡೆಗೆ ಪರಿಷತ್ತಿನ ನಡಿಗೆ ಎಂಬ ಧ್ಯೇಯ ವಾಕ್ಯದೊಡನೆ ಪರಿಷತ್ತು ಗ್ರಾಮಮಟ್ಟದವರೆಗೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಹಣಕಾಸಿನ ನೆರವು ಇಲ್ಲದೆ ಅಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅಲ್ಲಿಯೇ ಗೌರವಿಸಿ ಪ್ರೋತ್ಸಾಹಿಸುವುದು ಈ ವಿನೂತನ ಯೋಜನೆಯ ಉದ್ದೇಶ. ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ನಾಡಿನಾದ್ಯಂತ ಈ ಯೋಜನೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

೫. ಕನ್ನಡಕ್ಕೆ ಶಾಸ್ತ್ರೀಯ ಭಾಷಾಸ್ಥಾನಮಾನದ ಹಕ್ಕೊತ್ತಾಯಕ್ಕಾಗಿ ಹೋಬಳಿ, ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪರಿಷತ್ತಿನ ಕೂಗು ಇಡೀ ನಾಡಿನ ಕೂಗಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚೆತ್ತು ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿದೆ. ಇದರ ಸಂಬಂಧವಾಗಿ ಪರಿಷತ್ತು ಸಂಭ್ರಮಿಸಿತು. ವಿಜಯೋತ್ಸವವನ್ನು ಆಚರಿಸಿತು.

೬. ಪರಿಷತ್ತಿನ ಹಿಂದಿನ ಎಲ್ಲಾ ಅಧ್ಯಕ್ಷರನ್ನೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಹ್ವಾನಿಸಿ ಸನ್ಮಾನಿಸುವ ಸಂಪ್ರದಾಯ ಬೆಳೆಸಿದೆ. ೧-೧೧-೨೦೦೯ರಂದು ೧೦ ಜನ ಹಿಂದಿನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

೭. ಪರಿಷತ್ತು ಪುಸ್ತಕ ಪ್ರಕಟಣೆ ಮತ್ತು ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ಮುದ್ರಣ ಕಲೆಯ ಸ್ಪರ್ಧೆಯನ್ನು ಮೆಟ್ಟಿ ನಿಂತು ಹೊಸತನ ತಂದು ವರ್ಷದಲ್ಲಿ ೪೦ ಲಕ್ಷ ರೂ.ಗಳ ಮಾರಾಟ ಮಾಡಿದೆ.

೮. ಪ್ರತಿ ಜಿಲ್ಲೆಗೆ ವಾರ್ಷಿಕವಾಗಿ ನಿರ್ವಹಣಾ ವೆಚ್ಚವೆಂದು ೬೦ ಸಾವಿರ ರೂ.ಗಳನ್ನು ನೀಡಲಾಗುತ್ತಿದೆ.

೯. ಕಾಸರಗೋಡು, ಮಡಕಶಿರ, ಮುಂಬೈ, ಚನ್ನೈ, ಹೊರರಾಜ್ಯ ಘಟಕಗಳಿಗೆ ತಲಾ ಎರಡು ಲಕ್ಷ ರೂ.ಗಳನ್ನು ನೀಡಿ ಹೊರನಾಡ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಪ್ರಥಮ ಬಾರಿಗೆ ಮಾಡಿ ದಾಖಲೆ ಸ್ಥಾಪಿಸಿದೆ.

೧೦. ಚಿತ್ರದುರ್ಗ, ಗದಗಿನಲ್ಲಿ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಮುಗಿಸಿದೆ. ೭೭ನೆಯ ಸಮ್ಮೇಳನವನ್ನು ರಾಜಧಾನಿ ಬೆಂಗಳೂರಿನಲ್ಲಿ ವೈಭವ ವಿಜೃಂಭಣೆಗಳಿಂದ ಆಚರಿಸಲು ಅದ್ದೂರಿಯ ತಯಾರಿ ನಡೆದಿದೆ. ಡಿಸೆಂಬರ್ ೨೪, ೨೫ ಮತ್ತು ೨೬ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಹಾ ಪೋಷಕತ್ವದ ಮತ್ತು ಗೃಹ ಹಾಗೂ ಸಾರಿಗೆ ಸಚಿವ ಶ್ರೀ ಆರ್. ಅಶೋಕ್‌ರ ಮುಂದಾಳತ್ವದಲ್ಲಿ ಕಾರ್ಯೋನ್ಮುಖವಾಗಿದೆ.

ಅಧ್ಯಕ್ಷರ ಈ ಎಲ್ಲಾ ಪರಿಶ್ರಮಗಳ ಹಿಂದೆ ಕಾರ್ಯಕಾರಿ ಸಮಿತಿಯ ಸಹಕಾರವಿರುವುದು ಶ್ಲಾಘನೀಯ. ಅಂತೆಯೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಬಿ.ಆರ್. ಜಯರಾಮರಾಜೇ ಅರಸ್ ಮತ್ತು ನಿರ್ದೇಶಕರಾದ ಶ್ರೀ ಮನು ಬಳಿಗಾರರ ಪ್ರೋತ್ಸಾಹ, ಸಹಾಯ, ಸಹಕಾರಗಳು ಅವಿಸ್ಮರಣೀಯ. ಒಟ್ಟು ಸರ್ಕಾರದ ಪ್ರೋತ್ಸಾಹಕ್ಕೆ ಪರಿಷತ್ತು ಋಣಿಯಾಗಿ ಕೊಟ್ಟ ಮಾತಿನಂತೆ ನಡೆದು ತೋರಿಸುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಶೈಕ್ಷಣಿಕ ಚಟುವಟಿಕೆಗಳು

ಕನ್ನಡ ಸಾಹಿತ್ಯ ಪರಿಷತ್ತು ತನ್ನ ನೂರಾರು ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿರುವ ಜಾನಪದ ಮತ್ತು ಶಾಸನ ಡಿಪ್ಲೊಮಾ ತರಗತಿಗಳನ್ನು ನಡೆಸುತ್ತಿದೆ. ಇವುಗಳ ಪಠ್ಯ ಮತ್ತು ಪರೀಕ್ಷೆಗಳು ವಿಶ್ವವಿದ್ಯಾಲಯದ ನಿಯಮಗಳಿಗನುಸಾರವಾಗಿ ನಡೆದುಕೊಂಡು ಹೋಗುತ್ತಿವೆ. ನುರಿತ ವಿದ್ವಾಂಸರು ಸಂಜೆ ೫ ರಿಂದ ೭ ರವರೆಗೆ ತರಗತಿಗಳನ್ನು ತೆಗೆದುಕೊಂಡು ಬೋಧಿಸುತ್ತಾರೆ. ಶನಿವಾರ, ಭಾನುವಾರ ಮತ್ತು ರಜಾ ದಿನಗಳಂದು ವಿಶೇಷ ತರಗತಿಗಳು ಮತ್ತು ಅತಿಥಿ ಉಪನ್ಯಾಸಗಳಿರುತ್ತವೆ. ಕನ್ನಡ ವಿಶ್ವವಿದ್ಯಾಲಯದ ನಿಯಮಗಳಂತೆ ಪರೀಕ್ಷಾ ಶುಲ್ಕ ಮತ್ತಿತರ ಶುಲ್ಕಗಳನ್ನು ವಿದ್ಯಾರ್ಥಿಗಳು ತುಂಬುತ್ತಾರೆ.

ಇತ್ತೀಚೆಗೆ ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಹಿನ್ನೆಲೆ ಇರುವ ಅಧ್ಯಾಪಕರಿಂದ ಸಂಶೋಧನಾ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಾಪಕರನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕನ್ನಡ ಪ್ರೇಮಿಗಳಿಗೆ ಸಂಶೋಧನಾ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಎಂ.ಫಿಲ್.,. ಪಿ.ಎಚ್‌ಡಿ., ಪದವಿಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಸದ್ಯ ಕನ್ನಡ ಇತಿಹಾಸ, ಸಮಾಜಶಾಸ್ತ್ರಗಳಲ್ಲಿ ಪದವಿಗಳನ್ನು ನೀಡಲು ಕನ್ನಡ ವಿಶ್ವವಿದ್ಯಾಲಯ ಒಪ್ಪಿದೆ. ಇವುಗಳ ಪಠ್ಯ, ಬೋಧನಾ ಕ್ರಮ, ಪರೀಕ್ಷೆಗಳು ಹಂಪಿ ವಿಶ್ವವಿದ್ಯಾಲಯದ ನಿಯಮಗಳಂತೆ ನಡೆಯುತ್ತವೆ. ಸಂಶೋಧನಾ ಕಮ್ಮಟ, ವಿಶೇಷ ಮತ್ತು ಅತಿಥಿ ಉಪನ್ಯಾಸ ಮಾಲೆ, ಪ್ರಚಾರೋಪನ್ಯಾಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆಯಾ ಕ್ಷೇತ್ರಗಳಲ್ಲಿನ ನುರಿತ ವಿದ್ವಾಂಸರಿಂದ ತರಬೇತಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡೇತರಿಗಾಗಿ ಮತ್ತು ಕನ್ನಡ ಕಲಿಯಬೇಕೆಂಬ ಆಸಕ್ತಿ ಇರುವವರಿಗಾಗಿ ಕನ್ನಡ ಪ್ರವೇಶ, ‘ಕನ್ನಡ ಕಾವ, ‘ಕನ್ನಡ ಜಾಣ, ‘ಕನ್ನಡ ರತ್ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

೧. ಕನ್ನಡ ಕಲಿಯಲಪೇಕ್ಷಿಸುವ ೧೦ ವರ್ಷಗಳಿಗೆ ಮೇಲ್ಪಟ್ಟವರು ಈ ಕನ್ನಡ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗುತ್ತಾರೆ. ಅರ್ಜಿಗಳನ್ನು ಜೂನ್ ತಿಂಗಳಿನಿಂದ ನೀಡಲಾಗುವುದು. ಸಾಮಾನ್ಯವಾಗಿ ಸೆಪ್ಟೆಂಬರ್ ಮಾಹೆಯಲ್ಲಿ ನೋಂದಣಿ ಪ್ರಕ್ರಿಯೆ ಮುಗಿಯುತ್ತದೆ. ಜನವರಿ ಮೊದಲನೇ ಅಥವಾ ಎರಡನೇ ವಾರದಲ್ಲಿ ವಿವಿಧ ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದು ಮಾರ್ಚ್ ಕೊನೆಯ ವೇಳೆಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಇವುಗಳ ನಿರ್ದಿಷ್ಟ ದಿನಾಂಕಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಪರಿಷತ್ತಿನ ಮಾಸಿಕ ಪತ್ರಿಕೆ ಕನ್ನಡನುಡಿ ಯಲ್ಲಿಯೂ ಸುದ್ಧಿ ಮಾಡಲಾಗುತ್ತದೆ. ಪರೀಕ್ಷೆಗಳು ಮೂರು ಗಂಟೆಗಳ ಅವಧಿಯಲ್ಲಿ ಗರಿಷ್ಟ ೧೦೦ ಅಂಕಗಳ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ. ಅಕ್ಷರ, ಪದ, ವಾಕ್ಯ ರಚನೆ; ಭಾಷೆ ಮತ್ತು ಸಾಹಿತ್ಯ ಪರಿಚಯದ ಪಠ್ಯವಿರುತ್ತದೆ. ಪರಿಷತ್ತು ಸಿದ್ದಗೊಳಿಸಿರುವ ತಿಳಿಕನ್ನಡ ಭಾಗ-೧ ಮತ್ತು ತಿಳಿಕನ್ನಡ ಭಾಗ-೨ ಪುಸ್ತಕಗಳನ್ನು ಪಠ್ಯಗಳನ್ನಾಗಿರಿಸಿದೆ. ಇದರ ಪರೀಕ್ಷಾ ಶುಲ್ಕ ೨೫೦ ರೂ.ಗಳು

೨. ಕನ್ನಡ ಕಾವ ಪರೀಕ್ಷೆ ತೆಗೆದುಕೊಳ್ಳಬೇಕಾದರೆ ಕನ್ನಡ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ೭ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದು ೧೬ ವರ್ಷ ವಯಸ್ಸಾಗಿರಬೇಕು. ತಲಾ ೧೦೦ ಅಂಕಗಳ ಮೂರು ಗಂಟೆಗಳ ಅವಧಿಯ ೨ ಪರೀಕ್ಷೆಗಳಿರುತ್ತವೆ. ೧೦ ಅಂಕಗಳ ಮೌಖಿಕ ಪರೀಕ್ಷೆ ಇರುತ್ತದೆ. ಅ) ಕನ್ನಡ ಸಾಹಿತ್ಯ ಸಂಗಮ ಆ) ವ್ಯಾವಹಾರಿಕ ಕನ್ನಡ ಮತ್ತು ಸಂವಹನ ಕನ್ನಡ ಇದರ ಪಠ್ಯಗಳಾಗಿವೆ. ಇದರ ಪರೀಕ್ಷಾ ಶುಲ್ಕ ೫೦೦ ರೂ.ಗಳು

೩. ಕನ್ನಡ ಜಾಣ ಪರೀಕ್ಷೆ ತೆಗೆದುಕೊಳ್ಳಲು ಕನ್ನಡ ಕಾವ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಅಭ್ಯರ್ಥಿಗೆ ೧೮ ವರ್ಷ ವಯಸ್ಸಾಗಿರಬೇಕು. ತಲಾ ೧೦೦ ಅಂಕಗಳ ಮೂರು ಗಂಟೆಗಳ ಅವಧಿಯ ೪ ಪರೀಕ್ಷೆಗಳಿರುತ್ತವೆ. ೧೦ ಅಂಕಗಳ ಮೌಖಿಕ ಪರೀಕ್ಷೆ ಇರುತ್ತದೆ. ಅ) ನಡುಗನ್ನಡ ಕಾವ್ಯ ಸಂಗಮ ಆ) ನಾಟಕ ಮತ್ತು ಪ್ರಬಂಧ ಸಾಹಿತ್ಯ ಇ) ಕನ್ನಡ ಸಾಹಿತ್ಯ ಚರಿತ್ರೆ ಈ) ಹೊಸಗನ್ನಡ ವ್ಯಾಕರಣ, ಛಂದಸ್ಸು ಇದರ ಪಠ್ಯಗಳಾಗಿವೆ. ಇದರ ಪರೀಕ್ಷಾ ಶುಲ್ಕ ರೂ.೫೫೦ಗಳು.

೪. ಕನ್ನಡ ರತ್ನ ಪದವಿ ಪರೀಕ್ಷೆಗಳನ್ನೊಳಗೊಂಡ ಪರೀಕ್ಷೆ. ಇದರಲ್ಲಿ ತೇರ್ಗಡೆ ಹೊಂದಿದವರು ಕನ್ನಡ ಸ್ನಾತಕೋತ್ತರ ಪದವಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಪರಿಷತ್ತಿನಲ್ಲಿ ಈ ಪರೀಕ್ಷೆ ತೆಗೆದುಕೊಳ್ಳಲು ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ೩ ವರ್ಷಗಳ ಸೇವಾವಧಿ ಮುಗಿಸಿರಬೇಕು ಅಥವಾ ಸಂಸ್ಕೃತದ ಸಾಹಿತ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ೨೦ ವರ್ಷ ವಯಸ್ಸಾಗಿರಬೇಕು. ತಲಾ ೧೦೦ ಅಂಕಗಳ ಐದು ಪ್ರಶ್ನೆ ಪತ್ರಿಕೆಗಳು ಮೂರು ಗಂಟೆಯ ಅವಧಿಗಿರುತ್ತವೆ. ಇದಕ್ಕೆ ಅ) ಪ್ರಾಚೀನ ಕನ್ನಡ ಕಾವ್ಯಸಂಗಮ. ಆ) ಆಧುನಿಕ ಕನ್ನಡ ಕಾವ್ಯ ಸಂಗಮ. ಇ) ಕನ್ನಡ ಕಥಾ ಸಂಗಮ. ಈ) ಸಾಹಿತ್ಯ ಚಿಂತನೆ. ಉ) ಭಾಷೆ, ರಚನೆ ಮತ್ತು ಬಳಕೆ. ಊ) ಜಾನಪದ ಪ್ರವೇಶ. ಋ) ಕನ್ನಡ ಸಂಸ್ಕೃತಿ, ಕೃತಿಗಳು ಪಠ್ಯವಾಗಿವೆ. ಈ ಎಲ್ಲಾ ಪರೀಕ್ಷೆಗಳ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಇದರ ಪರೀಕ್ಷಾ ಶುಲ್ಕ ೬೦೦ ರೂ.ಗಳು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡೇತರರಿಗಾಗಿ ಈ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ತನ್ಮೂಲಕ ಕನ್ನಡ ಕಲಿಸುವ, ಬೆಳೆಸುವ, ಉಳಿಸುವ ಪ್ರಕ್ರಿಯೆಯಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿದೆ. ಹೊರನಾಡಿನಿಂದ ವಲಸೆ ಬಂದಿರುವ ಉದ್ಯೋಗಿಗಳಿಗೆ, ಉದ್ಯಮದಾರರಿಗೆ ಇದರಿಂದ ಅನುಕೂಲವಾಗುತ್ತಿದೆ. ಸರ್ಕಾರದ ಅಧಿಕಾರಿಗಳಿಗೆ, ನೌಕರರಿಗೆ ಇಲಾಖೆ ಗೊತ್ತು ಮಾಡಿರುವ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಶೈಕ್ಷಣಿಕ ಮಾಧ್ಯಮ ಮತ್ತು ಭಾಷಾ ಬೋಧನೆಯ ವಿಚಾರದಲ್ಲಿ ಅಸ್ಪಷ್ಟತೆ ಇದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮಾತೃಭಾಷೆಯಾದ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಓದದೆ ಇರುವ ಬೇರೆ ಭಾಷೆಗಳನ್ನು ಪ್ರಥಮ ಭಾಷೆಯಾಗಿ ಓದಿದವರಿಗೆ ಈ ಪರೀಕ್ಷೆಗಳು ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಜ್ಞಾನವನ್ನು ನೀಡುತ್ತಿವೆ. ಪರಿಷತ್ತಿನ ಪರೀಕ್ಷೆಗಳಲ್ಲಿ ಮೊದಲ ೩ ರ‍್ಯಾಂಕ್ ವಿಜೇತರಿಗೆ ಬಹುಮಾನಗಳನ್ನು ಸಹ ನೀಡಲಾಗುತ್ತದೆ.

ಪರಿಷತ್ತಿನ ಸಂಪನ್ಮೂಲಗಳು

ಕನ್ನಡ ಸಾಹಿತ್ಯ ಪರಿಷತ್ತು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಮೇ ೫, ೧೯೧೫ರಲ್ಲಿ ಸ್ಥಾಪಿತವಾಗಿರುವುದು. ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಪನ್ಮೂಲವಾಗಿ ಕಾಣುವುದು ಆಜೀವ ಸದಸ್ಯತ್ವ. ಅದು ಈಗ ಒಂದು ಲಕ್ಷ ಇಪ್ಪತ್ತು ಸಾವಿರ ದಾಟಿದೆ. ಈ ಮೊದಲು ೯೩ ವರ್ಷಗಳಲ್ಲಿ ೬೦ ಸಾವಿರ ಸದಸ್ಯರಿದ್ದು, ಕಳೆದ ಎರಡು ವರ್ಷಗಳಲ್ಲಿ ೬೦ ಸಾವಿರ ಸದಸ್ಯರಾಗಿದ್ದಾರೆ. ಇದರ ಶುಲ್ಕ ೨೬೧ ರೂ.ಗಳು. ಇದರ ಬಡ್ಡಿಯಿಂದ ಕನ್ನಡನುಡಿ ಪರಿಷತ್ತಿನ ಮಾಸಿಕ ಪತ್ರಿಕೆಯನ್ನು ಸದಸ್ಯರಿಗೆ ಆಜೀವ ಪರ್ಯಂತ ಕಳುಹಿಸಬೇಕು. ಈಗ ನುಡಿಯ ಮುದ್ರಣದ ವೆಚ್ಚ ಪ್ರತಿ ತಿಂಗಳಿಗೆ ೫ ರಿಂದ ೬ ಲಕ್ಷ ರೂ. ಆಗುತ್ತಿದೆ. ಈ ಸದಸ್ಯತ್ವದ ಠೇವಣಿ ಬಡ್ಡಿಯಲ್ಲದೆ ಮತ್ತಷ್ಟು ಈ ವೆಚ್ಚಕ್ಕಾಗಿ ಸರಿ ಹೊಂದಿಸಬೇಕಿದೆ. ಪರಿಷತ್ತಿನ ಸಂಪನ್ಮೂಲಗಳಲ್ಲಿ ಪುಸ್ತಕ ಪ್ರಕಟಣೆ ಮತ್ತು ಮಾರಾಟ ಗಣನೀಯವಾದುದು. ಪರಿಷತ್ತು ಸುಮಾರು ೧೦೦೦ ಪುಸ್ತಕಗಳನ್ನು ಪ್ರಕಟಿಸಿದೆ. ಕಳೆದ ಎರಡು ವರ್ಷಗಳಲ್ಲಿ ೫೦೦ ಪುಸ್ತಕಗಳನ್ನು ಪ್ರಕಟಿಸಿ ೧೫೦೦ ಪುಸ್ತಕಗಳನ್ನು ಪ್ರಕಟಿಸಿದ ದಾಖಲೆ ನಿರ್ಮಿಸಿದೆ. ಇತ್ತೀಚೆಗಿನ ಮುದ್ರಣ ಕಲಾ ಕೌಶಲವನ್ನು ಬಳಸಿ ಸುಂದರವಾಗಿಯೂ ಮತ್ತು ಜನರು ಅಪೇಕ್ಷೆ ಪಡುವ ಗುಣಮೌಲ್ಯದಿಂದ ಕೂಡಿದ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಿರುವುದರಿಂದ ಮಾರಾಟದಲ್ಲಿ ಈ ಸಾಧನೆ ಸಾಧಿಸಲು ಸಾಧ್ಯವಾಗಿದೆ. ಇಲ್ಲಿಯವರೆಗೆ ಈ ಮಾರಾಟದ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಆಡಳಿತ ನಿರ್ವಹಣೆಯ ವೆಚ್ಚಕ್ಕೆ ಬಳಸಿಕೊಳ್ಳುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಮಾರಾಟದ ಶೇ.೩೦ರಷ್ಟು ಮಾತ್ರ ನಿರ್ವಹಣೆಗೆ ಬಳಸಿಕೊಂಡು ಶೇ.೭೦ರಷ್ಟನ್ನು ಪ್ರಕಟಣೆಗಳಿಗಾಗಿಯೇ ಮೀಸಲಿಟ್ಟಿದ್ದಾರೆ. ಇದು ಪರಿಷತ್ತಿನ ಆರ್ಥಿಕ ಸಬಲೀಕರಣಕ್ಕೆ ಹಾಲಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ತೆಗೆದುಕೊಂಡಿರುವ ಸದೃಢ ದೀರ್ಘಕಾಲಿಕ ಕ್ರಮ. ಇದಕ್ಕೆ ಬಿ.ಎಂ.ಶ್ರೀ. ಅಚ್ಚುಕೂಟದ ಕೊಡುಗೆಯೂ ಅಪಾರವಾದುದು. ಇರುವ ಅಚ್ಚುಕೂಟವನ್ನು ಆಧುನೀಕರಣಗೊಳಿಸಿ ಅದರಿಂದಲೂ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸುವ ಯೋಚನೆ ಯೋಜನೆ ಅಧ್ಯಕ್ಷರ ಮನಸ್ಸಿನಲ್ಲಿದೆ.

ದತ್ತಿಗಳು : ಸದಸ್ಯತ್ವ ಬಿಟ್ಟರೆ ಸಂಪನ್ಮೂಲವಾಗಿ ಕಾಣುವುದು ಸಹೃದಯ ಕನ್ನಡ ಮನಸ್ಸುಗಳ ದತ್ತಿ ದಾನಗಳು. ೯೩ ವರ್ಷಗಳಲ್ಲಿ ೬೫೦ ವಿವಿಧ ದತ್ತಿಗಳಿದ್ದು ಕಳೆದೆರಡು ವರ್ಷಗಳಲ್ಲಿ ದ್ವಿಗುಣವಾಗಿ ಬೆಳೆದು ೧೨೨೦ ದತ್ತಿಗಳು ಸಂಗ್ರಹಿತವಾಗಿವೆ. ದತ್ತಿಯ ಆಶಯಗಳು ವೈವಿಧ್ಯಮಯವಾಗಿವೆ. ಇವುಗಳಿಂದ ಕನ್ನಡದ ಚಟುವಟಿಕೆಗಳು ಕೇಂದ್ರದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ನಿತ್ಯೋತ್ಸವವಾಗಿ ನಿರಂತರ ನಡೆಯುತ್ತಲೇ ಇರುತ್ತವೆ. ೨ ಆಣೆ ಗಿಳಿದತ್ತಿಯಿಂದ ಹಿಡಿದು ರೂ.೧.೫ ಕೋಟಿ ರೂ.ಗಳ ಬಿ.ಎಂ.ಟಿ.ಸಿ.ಯ ನೃಪತುಂಗ ಪ್ರಶಸ್ತಿ ನೀಡುವವರೆಗೆ ದತ್ತಿಗಳಿವೆ. ದತ್ತಿಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುವ, ನಗದು ಬಹುಮಾನ ನೀಡುವ, ಕನ್ನಡ ಕಲಿಸುವ, ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಗಳನ್ನೇರ್ಪಡಿಸುವ, ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳನ್ನು ನೀಡಿ ಗೌರವಿಸುವ ಹಲವಾರು ಆಶಯಗಳಿವೆ. ಮಹನೀಯರೊಬ್ಬರು ೨೦೦ ರೂ.ಗಳನ್ನಿಟ್ಟು ಅದರ ಬಡ್ಡಿಯಿಂದ ಪ್ರತಿವರ್ಷ ೧ ಪುಸ್ತಕ ಗ್ರಂಥಾಲಯಕ್ಕೆ ಸೇರಿಸಿ ಎಂದು ಸು.೮೦ ವರ್ಷಗಳ ಹಿಂದೆ ದಾನ ನೀಡಿ ದತ್ತಿ ಸ್ಥಾಪಿಸಿದ್ದಾರೆ. ೩೦೦ ರೂ.ಗಳನ್ನು ೧೯೩೫ರಲ್ಲಿ ಬಿ.ಎಂ.ಶ್ರೀ.ಯವರಿಟ್ಟು. ಕೃಷ್ಣರಾಜ ಪರಿಷನ್ಮಂದಿರದಲ್ಲಿರುವ ಕವಿಗಳ ಭಾವಚಿತ್ರಗಳಿಗೆ ಹೂಹಾರ ಹಾಕಿ ಎಂಬ ದತ್ತಿ ಇದೆ. ಸಿಹಿ ಹಂಚುವಂತೆ, ನಿರ್ದಿಷ್ಟ ಕಾವ್ಯಪ್ರಕಾರ, ಕವಿ, ಕವಿಯತ್ರಿಯರ ಬಗ್ಗೆ ಪ್ರಚಾರ ಮಾಡುವಂತೆ ಇಟ್ಟಿರುವ ದತ್ತಿಗಳಿವೆ. ಶಿವಮೊಗ್ಗ ಜಿಲ್ಲೆಯ ಭೂಪಾಲಂ ಅವರು ಪ್ರತಿವರ್ಷ ಪುಸ್ತಕ ಮುದ್ರಿಸಿ ಪ್ರಕಟಿಸುವ ಮತ್ತು ಬರಹಗಾರರಿಗೆ ನಗದು ಬಹುಮಾನ ನೀಡುವ ದತ್ತಿ ಇಟ್ಟಿದ್ದಾರೆ.

ಶ್ರೀ ಕೃಷ್ಣರಾಜಪರಿಷನ್ಮಂದಿರ ಇತ್ತೀಚೆಗೆ ನವೀಕರಣಗೊಂಡು ಸುಸಜ್ಜಿತವಾಗಿದೆ. ಇದು ನಗರದ ಸಾಹಿತ್ಯ ಸಾಂಸ್ಕೃತಿಕ ಆಸಕ್ತರಿಗೆ ಪ್ರಾರಂಭದಿಂದಲೂ ವೇದಿಕೆಯಾಗಿತ್ತು. ಹಾಲಿ ಅಧ್ಯಕ್ಷರು ವಜ್ರಮಹೋತ್ಸವ ಕಟ್ಟಡದ ಮೂರನೆಯ ಮಹಡಿಯಲ್ಲಿ ನಿರುಪಯೋಗಿಯಾದ ಸಾವಿರಾರು ಟನ್ನುಗಟ್ಟಲೆ ಬಿದ್ದಿದ್ದ ಹಳೆಯ ವಸ್ತುಗಳನ್ನು ತೆರವು ಮಾಡಿಸಿ ಅದರ ಜೀರ್ಣೋದ್ಧಾರ ಮಾಡಿ ಕಾರ್ಯಕ್ರಮಗಳ ಬಾಡಿಗೆಗೆ ಕೊಟ್ಟು ಸಂಪನ್ಮೂಲ ವೃದ್ಧಿಸಿದ್ದಾರೆ. ಇದಕ್ಕೆ ಕುವೆಂಪು ಸಭಾಂಗಣ ಎಂದು ಹೆಸರು ಕೊಟ್ಟಿದ್ದಾರೆ. ಇವುಗಳ ಸಂಪನ್ಮೂಲವನ್ನು ಸಹ ಆಡಳಿತ ನಿರ್ವಹಣೆಗೆ ಬಳಸುತ್ತಿದ್ದರು. ಹಾಲಿ ಅಧ್ಯಕ್ಷರು ಇದನ್ನು ಸಹ ಶೇ.೩೦:೭೦ರ ಅನುಪಾತದಲ್ಲಿ ನಿರ್ವಹಿಸುವಂತೆ ಏರ್ಪಡಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ, ಸಿಂಡಿಕೇಟ್ ಬ್ಯಾಂಕ್‌ಗಳಿಂದ ತಿಂಗಳ ಬಾಡಿಗೆಯಾಗಿಯೂ ಬರುತ್ತಿರುವ ಸಂಪನ್ಮೂಲವಿದೆ. ಇಷ್ಟಾದರೂ ಕನ್ನಡ ಸಾಹಿತ್ಯ ಪರಿಷತ್ತು ತನ್ನ ವಿಶಾಲ ವ್ಯಾಪ್ತಿಯ ಚಟುವಟಿಕೆಗಳಿಗೆ ಸಂಪನ್ಮೂಲದ ಕೊರತೆ ಎದುರಿಸುತ್ತಿದೆ. ಸರ್ಕಾರದತ್ತ, ದಾನಿಗಳತ್ತ ಕೈಚಾಚಿ ಕೂರುವುದು ಬೇಡ, ಸುಭದ್ರವಾದ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಬೇಕೆಂದು ಹಾಲಿ ಅಧ್ಯಕ್ಷರು ೧೦ ಕೋಟಿ ರೂ.ಗಳ ಕನ್ನಡ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಸಹೃದಯರು ಈ ಆಶಯವನ್ನು ಸಂಪೂರ್ಣಗೊಳಿಸುತ್ತಾರೆಂಬ ನಂಬಿಕೆ ಇದೆ.

ಪ್ರೊ. ಎನ್. ಚಂದ್ರಪ್ಪ

No comments:

Post a Comment