Friday, February 4, 2011

ಕ. ಸಾ.ಪ. ಅಧ್ಯಕ್ಷರ ಆಶಯ ಭಾಷಣ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಆಶಯ ಭಾಷಣ

Dr.Nallur Prasadಪ್ರೀತಿಯ ಕನ್ನಡ ಮನಸ್ಸುಗಳೇ,

ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಮೊದಲನೆಯ ಸಮ್ಮೇಳನವನ್ನು ಚಿತ್ರದುರ್ಗದಲ್ಲೂ ಎರಡನೆಯ ಸಮ್ಮೇಳನವನ್ನು ಗದಗದಲ್ಲೂ ಜನ ಮೆಚ್ಚುವಂತೆ ನಡೆಸಿ ಈಗ ಮೂರನೇ ಸಮ್ಮೇಳನವನ್ನು ಬೆಂಗಳೂರು ಮಹಾನಗರದಲ್ಲಿ ಸಂಘಟಿಸುವ ದುಸ್ಸಾಹಸಕ್ಕೆ ಆತ್ಮವಿಶ್ವಾಸದಿಂದ ಕೈಹಚ್ಚಿದ್ದೇನೆ. ಇಲ್ಲಿಯವರೆಗೆ ನಡೆದಿರುವುದೆಲ್ಲ ಚೆನ್ನಾಗಿಯೇ ನಡೆದಿದೆ, ಮುಂದಿನದೂ ಚೆನ್ನಾಗಿಯೇ ಆಗುತ್ತದೆನ್ನುವ ಭರವಸೆ ಖಂಡಿತ ಇದೆ. ದುಸ್ಸಾಹಸ ಎನ್ನುವುದು ಕೆಟ್ಟ ಸಾಹಸ ಎಂದೇನೂ ಅರ್ಥವಾಗಬೇಕಿಲ್ಲ, ಅದು ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸಂಕಲ್ಪದ ಸಾಹಸ, ವೀರೋಚಿತವಾದ ಸಾಹಸ, ಮಹಾಸಾಹಸ ಎಂದೂ ಅರ್ಥವಿಸ್ತಾರವನ್ನು ಪಡೆದುಕೊಂಡಿದೆ.

ನಲವತ್ತು ವರ್ಷಗಳ ಬಹುದೊಡ್ಡ ಅಂತರದಲ್ಲಿ ಬೆಂಗಳೂರಿನಲ್ಲಿ ಏರ್ಪಾಟಾಗಿರುವ ಈ ಸಮ್ಮೇಳನ ಬಹುದೊಡ್ಡ ಸವಾಲು ಮಾತ್ರವಲ್ಲ, ಅದು ಅಗ್ನಿದಿವ್ಯ ಎಂದು ಹೇಳಬಹುದಾದ ಮಟ್ಟಿಗಿನ ಸತ್ವಪರೀಕ್ಷೆಯೂ ಆಗಿದೆ. ಕರ್ನಾಟಕದ ಉದ್ದಗಲಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಅಪಾಯ ಆತಂಕಗಳಿರುವುದು ನಾವೆಲ್ಲ ಆರು ಕೋಟಿ ಕನ್ನಡಿಗರ ರಾಜಧಾನಿಯೆಂದು ಬಹು ಹೆಮ್ಮೆಯಿಂದ ಹೇಳಿಕೊಳ್ಳುವ ಬೆಂಗಳೂರು ಮಹಾನಗರದಲ್ಲಿಯೇ. ಬೆಂಗಳೂರನ್ನು ಕನ್ನಡಮಯವಾಗಿಸುವ ಪ್ರಾಮಾಣಿಕ ಪ್ರಯತ್ನಗಳು, ಹೋರಾಟಗಳು, ಚಳುವಳಿಗಳು ಬಹುಕಾಲದಿಂದ ನಡೆಯುತ್ತ ಬಂದಿವೆಯಾದರೂ ಅವು ನಿರೀಕ್ಷಿತ ಯಶ ಕಂಡಿರುವುದು ಕಡಿಮೆ. ಒಮ್ಮೆ ಅವು ಯಶ ಕಾಣುವ ದಿಕ್ಕಿನಲ್ಲಿ ಸಾಗಿದ್ದರೂ ಅದಕ್ಕಿಂತ ಭಿನ್ನವಾದ, ವಿಲಕ್ಷಣವಾದ, ಗಂಭೀರವಾದ ಸಮಸ್ಯೆಗಳು ಹೊಸಹೊಸದಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬೆಂಗಳೂರಿನ ದುರಂತವೆಂದರೆ ಇಲ್ಲಿರುವ ಕನ್ನಡಿಗರು ಅಭಿಮಾನದಿಂದ ತಲೆಯೆತ್ತಿ ಎದೆತಟ್ಟಿ ಇದು ನಮ್ಮದೆಂದು ಹೇಳಿಕೊಳ್ಳದಿರುವುದು; ಹೊರಗಿನಿಂದ ಇಲ್ಲಿಗೆ ಬಂದು ನಿರಾಳವಾಗಿ ಬದುಕುತ್ತಿರುವವರು ತಮಗೆ ಆಶ್ರಯ ಕೊಟ್ಟಿರುವ ಊರಿನ ವಿಚಾರದಲ್ಲಿ ಗೌರವದಿಂದ ನಡೆದುಕೊಳ್ಳದಿರುವುದು ಮತ್ತು ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಪ್ರೀತಿಸದಿರುವುದು.

ಇದನ್ನು ಮನಗಂಡೇ ನನ್ನ ಸ್ನೇಹಿತರು, ಆತ್ಮೀಯರು, ಸದಾ ಒಳಿತನ್ನೇ ಬಯಸುವ ಹಿತೈಷಿಗಳು ಬೆಂಗಳೂರಿನಲ್ಲಿ ಸಮ್ಮೇಳನ ಸಂಘಟಿಸುವ ಬಗ್ಗೆ ಭಯವನ್ನೂ ಆತಂಕವನ್ನೂ ವ್ಯಕ್ತಪಡಿಸಿದರು. ನಿರೀಕ್ಷೆಗಳು ಬೆಟ್ಟದಷ್ಟು ಎತ್ತರದಲ್ಲಿರುವ ಬೆಂಗಳೂರಿನ ಸಮ್ಮೇಳನ ಮಾಡಿ ಸೈ ಎನ್ನಿಸಿಕೊಳ್ಳುವುದು ಕಷ್ಟ, ಇದು ಬೆಟ್ಟಕ್ಕೆ ಕಲ್ಲು ಹೊತ್ತಂತೆ ನಿರರ್ಥಕ, ‘ಊರು ಉಪಕಾರ ಅರಿಯದು ಎನ್ನುವ ಗಾದೆಮಾತು ಬೆಂಗಳೂರಿಗೆ ಅಕ್ಷರಶಃ ಅನ್ವಯವಾಗುತ್ತದೆ ಎಂದು ಪರಿಪರಿಯಾಗಿ ಮನವರಿಕೆ ಮಾಡಿಕೊಡಲು ಅವರು ಪ್ರಯತ್ನಿಸಿದ್ದುಂಟು. ಅವರ ಆತಂಕ ಮತ್ತು ಅಪಾಯದ ಅರಿವಿನಲ್ಲಿ ಸತ್ಯಾಂಶವಿದೆಯೆಂಬುದು ನನಗೂ ಗೊತ್ತು. ಆದರೆ ಐದು-ಹತ್ತು ವರ್ಷಗಳಿಗೆ ಒಮ್ಮೆಯಾದರೂ ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಕನ್ನಡ ಸಾಹಿತ್ಯ ಸಮ್ಮೇಳನಗಳು ಆಗುತ್ತಿರಬೇಕು. ಕನ್ನಡತ್ವದ ಪ್ರತಿಷ್ಠಾಪನೆ ಮತ್ತು ನವೀಕರಣ ಆಗುತ್ತಿರಬೇಕು. ಕನ್ನಡ ಜಾಗೃತಿಯ ಕಹಳೆ ಮೊಳಗುತ್ತಿರಬೇಕು. ಎಲ್ಲ ತೆರನಾದ ಅಪಾಯಗಳ ವಿರುದ್ಧ ಕನ್ನಡಿಗರಿಗೆ ಎಚ್ಚರಿಕೆಯ ಸಂದೇಶ ಮುಟ್ಟುತ್ತಿರಬೇಕು. ಕನ್ನಡ ನೂರಕ್ಕೆ ನೂರರಷ್ಟು ಆಡಳಿತ ಭಾಷೆಯಾಗಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವಂತಾಗಬೇಕು. ನ್ಯಾಯಾಲಯದ ಭಾಷೆ ಕನ್ನಡವಾಗಬೇಕು. ಐಟಿ ಬಿಟಿಗಳಲ್ಲೂ ಕನ್ನಡ ಸಂವಹನ ಭಾಷೆಯಾಗಬೇಕು. ಇವೆಲ್ಲ ಆಗಬೇಕುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಲು ಬೇಕಾದ ಹುಮ್ಮಸ್ಸನ್ನು ತುಂಬುವುದಕ್ಕಾದರೂ ಆಗಿಂದಾಗ್ಗೆ ಬೆಂಗಳೂರಿನಲ್ಲಿ ಈ ಬಗೆಯ ಬೃಹತ್ ಸಮ್ಮೇಳನಗಳು ನಡೆಯಬೇಕು. ನಾಡಿನ ಬೇರೆ ಬೇರೆ ಭಾಗಗಳಿಂದ ಹಾಕುವ ಕೂಗುಗಳು ವಿಧಾನಸೌಧಕ್ಕೆ, ವಿಕಾಸಸೌಧಕ್ಕೆ, ರಾಜಭವನಕ್ಕೆ, ವಿಶ್ವೇಶ್ವರಯ್ಯ ಗೋಪುರದ ಕಟ್ಟಡಕ್ಕೆ, ಬಹು ಮಹಡಿಗಳ ಕಟ್ಟಡಕ್ಕೆ, ಉಚ್ಛ ನ್ಯಾಯಾಲಯಕ್ಕೆ, ಐಟಿಪಿಎಲ್‌ಗೆ, ಡಾಲರ್ಸ್ ಕಾಲೋನಿಗೆ, ಇಂದಿರಾನಗರಗಳಿಗೆ ತಲುಪುತ್ತದೆ ಎನ್ನುವ ಭರವಸೆಯಿಲ್ಲ. ಆದ್ದರಿಂದಲೇ ಇಲ್ಲಿಯವರೆಗೆ ಬಹಿರಂಗ ಅಧಿವೇಶನದಲ್ಲಿ ವೀರಾವೇಶದಿಂದ ಕೈಗೊಂಡ ನಿರ್ಣಯಗಳಾವುವೂ ಅನುಷ್ಠಾನಕ್ಕೆ ಬರುವುದು ಸಾಧ್ಯವಾಗಿಲ್ಲ. ಅದಕ್ಕಾಗಿಯೇ ಈ ಬಾರಿ ನಾವು ಹೊಸ ನಿರ್ಣಯಗಳನ್ನು ಕೈಗೊಳ್ಳುವ ಸಾಂಪ್ರದಾಯಿಕ ಕ್ರಮಕ್ಕೆ ಕೈಹಾಕಿಲ್ಲ. ಆದರೆ ಮೇಲೆ ಉಲ್ಲೇಖಿಸಲಾದ ಸ್ಥಳಗಳಿಗೆ ಮುಟ್ಟಬೇಕಾದ ಕನ್ನಡದ ಸೊಲ್ಲು, ಕನ್ನಡಿಗರ ಧ್ವನಿ ಇಲ್ಲಿಂದ ಕೂಗಿದರೆ, ನ್ಯಾಷನಲ್ ಕಾಲೇಜು ಮೈದಾನದಿಂದ ಕೂಗಿದರೆ ಖಂಡಿತ ಮುಟ್ಟುತ್ತದೆ ಎನ್ನುವ ವಿಶ್ವಾಸ ನನಗಿದೆ. ಆದ್ದರಿಂದ ಈ ಅಗ್ನಿಪರೀಕ್ಷೆ ಕೇವಲ ನನಗೊಬ್ಬನಿಗೆ ಅಲ್ಲ, ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಕುವೆಂಪು ಅವರು ಸೀತೆಯೊಂದಿಗೆ ಶ್ರೀರಾಮನನ್ನೂ ಅಗ್ನಿಪರೀಕ್ಷೆಗೆ ಗುರಿಪಡಿಸಿದಂತೆ ಎಲ್ಲ ಕನ್ನಡಿಗರದ್ದೂ ಆಗಿದೆ ಎಂದು ನಾನು ಭಾವಿಸಿದ್ದೇನೆ.

ಸದಾ ಹೊಸತನಕ್ಕೆ ತುಡಿಯುವ, ಜಾಗತೀಕರಣ ಮತ್ತಿತರ ಹೊಸ ಆಲೋಚನೆಗಳ ನೆಲೆಯಲ್ಲಿ ಸಾಂಸ್ಕೃತಿಕ ದಾಳಿಗೆ ಒಳಗಾಗಿ ಪರಿತಪಿಸುತ್ತಿರುವ, ಆ ಪರಿತಪಿಸುವಿಕೆಯಲ್ಲಿ ಆಧುನಿಕತೆಗೆ ಗರಿಗೆದರಿಕೊಂಡ ವಿಚಿತ್ರ ಬೃಹತ್ ನಗರ ಬೆಂಗಳೂರು. ಇಂಥ ಪರಿಸರದಲ್ಲಿ ಮತ್ತು ಸಂದರ್ಭದಲ್ಲಿ ಕನ್ನಡ ನಮ್ಮದು ಎನ್ನುವ ಅಸ್ಮಿತೆಯ ಸ್ಥಾಪನೆ ಬಹಳ ಮುಖ್ಯವಾದದ್ದು. ಇಂಥ ಅಸ್ಮಿತೆಯೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಮ್ಮೇಳನಕ್ಕೆ ಜಾತ್ರೆ ಅಥವಾ ಪರಿಷೆಯ ಸ್ವರೂಪ ಬಂದರೂ, ಅವುಗಳ ವಿಸ್ತರಣೆಯಾದರೂ ಪರವಾಗಿಲ್ಲ, ಕನ್ನಡವನ್ನು ಉಸಿರಾಗಿಸಿಕೊಂಡ ಎಲ್ಲ ಚೇತನಗಳ ಭಾವೈಕ್ಯ ಕೇಂದ್ರವಾಗಿ ಸಮ್ಮೇಳನವನ್ನು ರೂಪಿಸಬೇಕು. ಜನರಿಗೆ ಇಂಥ ಸಮ್ಮೇಳನಗಳ ಬಗೆಗೆ ವಿಶೇಷವಾದ ಆಕರ್ಷಣೆ ಇರುವುದಂತೂ ನಿಜ. ಎಲ್ಲರೂ ಒಂದೆಡೆ ಸೇರಲು, ಒಗ್ಗಟ್ಟಾಗಲು ಇರುವ ಒಂದೇ ಅವಕಾಶ ಈ ಸಮ್ಮೇಳನ. ಸಾಹಿತಿಗಳು, ಕಲಾವಿದರು, ಸಂಸ್ಕೃತಿ ಚಿಂತಕರು, ಶ್ರೀಸಾಮಾನ್ಯರು ಎಲ್ಲರೂ ಯಾವುದೇ ಭೇದ ಭಾವವಿಲ್ಲದೆ ಸಮ್ಮೇಳನದಲ್ಲಿ ಸಮಾಗಮಗೊಳ್ಳುತ್ತಾರೆ. ಎಲ್ಲರೂ ಸಂತೋಷ ಸಂಭ್ರಮಗಳಿಂದ ಸೇರಲು ಸಾಧ್ಯವಿರುವ ಒಂದೇ ಅವಕಾಶವೆಂದರೆ ಅದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾತ್ರ.

ಪ್ರತಿಯೊಂದು ಸಮ್ಮೇಳನಕ್ಕೆ ಸಜ್ಜಾಗುವಾಗಲೂ ಹಿಂದಿನದಕ್ಕಿಂತ ಭಿನ್ನವಾದ ಹೊಸ ರೂಪವೊಂದನ್ನು, ಸಾರ್ಥಕ ಸ್ವರೂಪವೊಂದನ್ನು ಕೊಡಬೇಕೆನ್ನುವ ತೀವ್ರ ಹಂಬಲ ನನ್ನನ್ನು ಆವರಿಸಿಕೊಳ್ಳುತ್ತಲೇ ಇದೆ. ಅದಕ್ಕಾಗಿ ನಾಡಿನ ಖ್ಯಾತ ಸಾಹಿತಿಗಳನ್ನು, ವಿಮರ್ಶಕರನ್ನು, ವಿಚಾರವಂತರನ್ನು, ಸಂಸ್ಕೃತಿ ಚಿಂತಕರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಿ ಗೋಷ್ಠಿಗೆ ಮುಖ್ಯ ಶೀರ್ಷಿಕೆ ಕೊಡುವುದು, ವಿಚಾರ ಮಂಡನೆಗೆ ಸೂಕ್ತವಾದ ಶೀರ್ಷಿಕೆಗಳನ್ನು ಕೊಡುವುದು, ವಿಚಾರಗಳಿಗೆ ನ್ಯಾಯ ಸಲ್ಲಿಸುವಂತೆ ಮಾತಾಡಬಲ್ಲರನ್ನು ಆಯ್ಕೆ ಮಾಡುವುದು ಇವೆಲ್ಲವೂ ಸಾಕಷ್ಟು ತಲೆ ಬಿಸಿ ಮಾಡುವ ಕೆಲಸಗಳೇ. ಕನ್ನಡವೆನ್ನುವುದು ಕೇವಲ ಭಾಷೆಯಾಗಲೀ, ಸಾಹಿತ್ಯವಾಗಲೀ ಅಲ್ಲ; ಅದು ಕನ್ನಡಿಗರ ಬದುಕನ್ನು ಸಮಗ್ರವಾಗಿ ಪ್ರತಿನಿಧಿಸುವಂಥದ್ದು ಎನ್ನುವ ಪ್ರಜ್ಞೆಯಿರಿಸಿಕೊಂಡು ಜನ, ಭಾಷೆ, ಬದುಕು ಎಲ್ಲವನ್ನೂ ಕುರಿತಂತೆ ಆಲೋಚಿಸುವಾಗ ತಲೆ ಬಿಸಿಯನ್ನು ಸ್ವಲ್ಪ ತಣ್ಣಗಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಬಹು ಕಾಲದ ನಂತರ ಬೆಂಗಳೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದುರಿಂದ ಕನಿಷ್ಟಪಕ್ಷ ಬೆಂಗಳೂರಿನತ್ತ ಒಂದು ಐತಿಹಾಸಿಕ ನೋಟವನ್ನು ಹಾಯಿಸಿ ಅದರ ಬೆಳಕಿನಲ್ಲಿ ವರ್ತಮಾನದ ಸವಾಲುಗಳ ಬಗೆಗೆ, ನಾಳಿನ ಬೆಂಗಳೂರಿನ ಬಗೆಗೆ ಚರ್ಚಿಸಬೇಕಾಗುತ್ತದೆ. ಇವತ್ತು ಬೆಂಗಳೂರು ಮತ್ತು ಕರ್ನಾಟಕದಲ್ಲಿರುವ ಜನರ ಬದುಕು ಮಾತ್ರವಲ್ಲ, ಪ್ರಪಂಚದ ಎಲ್ಲ ಜನರ ಬದುಕೂ ಒಂದಲ್ಲ ಒಂದು ರೀತಿಯ ನೋವು ಹಿಂಸೆಗಳಲ್ಲಿ ಸಿಲುಕಿಕೊಂಡಿರುವುದನ್ನು ನೋಡುತ್ತಿದ್ದೇವೆ.ಇದಕ್ಕೆ ಕಾರಣಗಳೇನು? ಪರಿಹಾರಗಳೇನು? ಹಳ್ಳಿಗಳು ಯಾತಕ್ಕೆ ನಗರದತ್ತ ಧಾವಿಸುತ್ತಿವೆ? ನಗರಗಳಲ್ಲಿ ಹಿಂಸಾತಾಂಡವ ನಡೆಯುತ್ತಿರುವುದೇಕೆ? ಹಳ್ಳಿಯ ಯುವಕರು ನಗರಗಳತ್ತ ಧಾವಿಸತೊಡಗಿದ್ದು, ಹಳ್ಳಿಯ ಮನೆಮನೆಗಳು ಅಸಹಾಯಕ ಮುದುಕ ಮುದುಕಿಯರ ಬಂದೀಖಾನೆಗಳಾಗುತ್ತಿರುವುದೇಕೆ? ಗ್ರಾಮೀಣ ಯುವಕರನ್ನು ಕೃಷಿ ಏಕೆ ಆಕರ್ಷಿಸುತ್ತಿಲ್ಲ? ವ್ಯವಸಾಯವನ್ನೇ ನಂಬಿದವರಿಗೆ ಅದು ಗೌರವ ತಂದುಕೊಡುವ ವೃತ್ತಿಯಾಗದಿರುವುದೇಕೆ? ವಿದ್ಯೆ ಎನ್ನುವುದು ಅಂಕಗಳಿಕೆಯ ಸಾಧನದ ಮಟ್ಟಕ್ಕೆ ಇಳಿದುಬಿಟ್ಟಿರುವುದು ಏನನ್ನು ಸೂಚಿಸುತ್ತಿದೆ? ಪುಸ್ತಕೋದ್ಯಮಕ್ಕೆ ಎದುರಾಗಿರುವ ಆತಂಕಗಳೇನು?ನಿರುತ್ತೇಜಕ ವಾತಾವರಣದಲ್ಲಿ ವೃತ್ತಿ ರಂಗಭೂಮಿ ಇನ್ನೂ ಉಸಿರಾಡುತ್ತಿರುವುದು ಹೇಗೆ ಸಾಧ್ಯವಾಗಿದೆ? ಬೆಂಗಳೂರನ್ನು ಕುರಿತಂತೆ ಕೆಂಪೇಗೌಡರ ದೂರದೃಷ್ಟಿ ಹೇಗಿತ್ತು? ಸಮೂಹ ಮಾಧ್ಯಮಗಳು ಎಷ್ಟರಮಟ್ಟಿಗೆ ಕನ್ನಡ ಪ್ರಜ್ಞೆಯನ್ನು ತೋರುತ್ತಿವೆ? ಸಾಮಾಜಿಕ ಹಕ್ಕುಗಳು ಮತ್ತು ಕಾನೂನುಗಳನ್ನು ಕುರಿತ ತಿಳುವಳಿಕೆ ನಮ್ಮ ಜನರಿಗೆ ಎಷ್ಟರಮಟ್ಟಿಗಿದೆ? - ಇಂಥ ನೂರಾರು ಪ್ರಶ್ನೆಗಳಿಗೆ ಸಮ್ಮೇಳನದ ಮೂರು ವೇದಿಕೆಗಳಲ್ಲಿ ನಡೆಯುವ ವಿಚಾರ ಗೋಷ್ಠಿಗಳಲ್ಲಿ ಉತ್ತರ ದೊರತೀತೆಂದು ನಾನು ಆಶಿಸಿದ್ದೇನೆ.

ಸಮ್ಮೇಳನದ ವಿಚಾರ ಗೋಷ್ಠಿ, ಕವಿಗೋಷ್ಠಿ ಎನ್ನುವುದೇ ಹೊಸತು ಹಳತರ ಸಮ್ಮಿಶ್ರಣ, ಹೂವು ಬೇರುಗಳ ಸಂಗಮ. ಮೂರು ವೇದಿಕೆಗಳ ಮೂರು ಕವಿಗೋಷ್ಠಿಗಳಲ್ಲಿ ನಾಡಿನ ಎಲ್ಲ ಭಾಗಗಳನ್ನೂ ಪ್ರತಿನಿಧಿಸುವ ಐವತ್ತಕ್ಕೂ ಹೆಚ್ಚು ಕವಿಗಳಿಗೆ ಕವಿತಾ ವಾಚನಕ್ಕೆ ಅವಕಾಶ ಕಲ್ಪಿಸಲಾಗಿದೆ, ಕವಿಗೋಷ್ಠಿಗೆ ವೈವಿಧ್ಯತೆ ತರುವ ಸಲುವಾಗಿ, ಸಂತೋಷ-ಸಂಭ್ರಮಗಳನ್ನು ತುಂಬುವ ಉದ್ದೇಶವಿರಿಸಿಕೊಂಡು ತಾರಾಮೌಲ್ಯವನ್ನು ಹೊಂದಿರುವ ಹಿರಿಯ ಕವಿಗಳು ಅವರ ಕವಿತೆಗಳನ್ನು ಅವರೇ ವಾಚನ ಮಾಡುವ, ಅವರ ಕವಿತೆಗಳಿಗೆ ರಾಗಸಂಯೋಜನೆ ಮಾಡಿ ನಾಡಿನ ಸುಪ್ರಸಿದ್ಧ ಗಾಯಕ-ಗಾಯಕಿಯರು ಹಾಡುವ ಸುಂದರ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ ಲೋಕದ ಪ್ರಮುಖರಾದ ಡಾ. ಯು.ಆರ್. ಅನಂತಮೂರ್ತಿ, ಡಾ. ಸಾ.ಶಿ. ಮರುಳಯ್ಯನವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುವುದೆನ್ನುವುದೇ ರೋಮಾಂಚನಗೊಳಿಸುವ ಸಂಗತಿಯಾಗಿದೆ.

ಇನ್ನು ಸಮ್ಮೇಳನಾಧ್ಯಕ್ಷರಾಗಿರುವ ಜಿ. ವೆಂಕಟಸುಬ್ಬಯ್ಯನವರು ಮಂಡ್ಯ ಜಿಲ್ಲೆಯ ಕಾವೇರಿ ತಟದ ಗಂಜಾನಲ್ಲಿ ಹುಟ್ಟಿ, ಮೈಸೂರಿನಲ್ಲಿ ಕಲಿತು, ಬೆಂಗಳೂರಿನಲ್ಲಿ ನೆಲೆ ನಿಂತವರು. ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಪಾಠ ಹೇಳಿಕೊಟ್ಟಿರುವ ಈ ೯೮ರ ಜವ್ವನಿಗ ನಡೆದಾಡುವ ನಿಘಂಟು, ಭಾಷಾ ಭಂಡಾರಿ, ಹಳೆಯ ಪದಗಳನ್ನು ಉಜ್ಜಿ ಉಜ್ಜಿ ಹೊಸ ಶಬ್ದಗಳನ್ನು ಟಂಕಿಸುವ ನುಡಿನಿಪುಣ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗಿನಿಂದ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವಿರಾಜಮಾನರಾಗಿರುವ ಈ ಕ್ಷಣದವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಿಚಾರದಲ್ಲಿ ಅಗಾಧವಾದ ಪ್ರೀತಿ, ಅಭಿಮಾನ, ಗೌರವಗಳನ್ನು ಏಕಪ್ರಕಾರವಾಗಿ ತೋರುತ್ತಲೇ ಬಂದಿದ್ದಾರೆ. ಸುಖದುಃಖಗಳನ್ನು ಲಾಭನಷ್ಟಗಳನ್ನು ಸಮಾನವಾಗಿ ಸ್ವೀಕರಿಸುತ್ತ ಅವರು ನಮಗೆಲ್ಲರಿಗೂ ಮಾದರಿಯೇ ಆಗಿದ್ದಾರೆ. ನಮ್ಮ ನಡುವಿನ ಈ ಹಿರಿಯ ಜೀವಿ ನನ್ನ ಅವಧಿಯಲ್ಲಿ ಸಮ್ಮೇಳನಾಧ್ಯಕ್ಷರಾಗಿರುವುದು ನನ್ನ ಬದುಕಿನ ಪುಣ್ಯ ವಿಶೇಷವೆಂದೇ ನಾನು ನಂಬಿದ್ದೇನೆ. ಶತಮಾನದ ಬದುಕಿನ ವೈಶಿಷ್ಟ್ಯಗಳ ಭಂಡಾರವೂ ಸಾಕ್ಷೀಪ್ರಜ್ಞೆಯೂ ಆಗಿರುವ ಜೀವಿಯವರೊಂದಿಗೆ ಸಾಹಿತಿಗಳು, ಸಂಶೋಧಕರು, ಪ್ರಾಧ್ಯಾಪಕರು, ವೈದ್ಯರು, ವಿದ್ವಾಂಸರು, ಸಾಮಾನ್ಯರು ನಡೆಸಲಿರುವ ಸಂವಾದದ ಬಗೆಗೆ ನಾನು ಅಪಾರ ಕುತೂಹಲವಿರಿಸಿಕೊಂಡಿದ್ದೇನೆ.

ಈ ಮಹಾನಗರದಲ್ಲಿ ನಡೆಯುತ್ತಿರುವ ಅದ್ಧೂರಿ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿರುವ ೧೪೦ ಸಾಧಕರನ್ನು ನಾಡಿನ ಮಹತ್ವದ ರಾಜಕಾರಣಿ, ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು ಸನ್ಮಾನಿಸಲಿದ್ದಾರೆ. ಸಾಧನೆಗೆ ಹಿರಿಯರು-ಕಿರಿಯರು ಎನ್ನುವ ಭೇದ ಹೇಗಿಲ್ಲವೋ ಹಾಗೆಯೇ ಸನ್ಮಾನಕ್ಕೆ ವಯಸ್ಸು ಮಾನದಂಡವಾಗಬೇಕಿಲ್ಲ. ಕರ್ನಾಟಕದಲ್ಲಿ ಸಾಧಕರ ಸಂಖ್ಯೆ ಕಡಿಮೆಯೇನಿಲ್ಲ. ಆಲೋಚನೆ ಮಾಡುತ್ತಾ ಹೋದಂತೆ ಪಟ್ಟಿಯೂ ಬೆಳೆಯುತ್ತ ಹೋಗುತ್ತದೆ. ಆದರೆ ಸಮ್ಮೇಳನವೆಂದರೆ ಕೇವಲ ಸನ್ಮಾನವಷ್ಟೇ ಅಲ್ಲವಲ್ಲ. ಆದ್ದರಿಂದ ಬೃಹತ್ತು ಮತ್ತು ಮಹತ್ತು ಎರಡರ ಸಮ್ಮಿಳನವಾಗುವಂತೆ ಈ ಸನ್ಮಾನ ಸಮಾರಂಭವನ್ನು ರೂಪಿಸಲಾಗಿದೆ.

೪೧ ವರ್ಷಗಳ ನಂತರ ನಡೆಯುತ್ತಿರುವ ಬೆಂಗಳೂರಿನ ಈ ಬೃಹತ್ ಪ್ರಮಾಣದ ಸಮ್ಮೇಳನವನ್ನು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಾಡಿನ ಮುಖ್ಯಮಂತ್ರಿಗಳೇ ಉದ್ಘಾಟಿಸುತ್ತಿರುವುದು ನನ್ನ ಸಂತಸವನ್ನು ನೂರ್ಮಡಿಗೊಳಿಸಿದೆ. ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮತ್ತು ಅವರ ಸರ್ಕಾರ ಕನ್ನಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು ಗೌರವದಿಂದಲೂ ಪ್ರೀತಿಯಿಂದಲೂ ನೋಡಿಕೊಂಡಿದ್ದಾರೆ. ಸಾಹಿತ್ಯ ಪರಿಷತ್ತಿನ ಎಲ್ಲ ಯೋಜನೆಗಳಿಗೆ ಯಾವ ಅಪಸ್ವರವನ್ನೂ ಎತ್ತದೆ ಅಸ್ತು ಎಂದಿರುವುದನ್ನು ಕಂಡು ನಾನು ವಿಸ್ಮಯಾಂತಃಕರಣನೂ ರೋಮಾಂಚಿತನೂ ಆಗಿದ್ದೇನೆ. ಸರ್ಕಾರ ನೀಡುತ್ತಾ ಬಂದಿರುವ ಅನುದಾನ, ಧನಸಹಾಯ, ಸಹಕಾರಗಳಿಗಾಗಿ ಅದರ ಯಜಮಾನರಾದ ಬಿ.ಎಸ್. ಯಡಿಯೂರಪ್ಪನವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಪರಿಯ ಸಹಾಯದಿಂದ ಹೃದಯತುಂಬಿ ಬಂದಾಗ ನಾನು ಹಿಂದೆಯೂ ಯಡಿಯೂರಪ್ಪನವರನ್ನು ಕನ್ನಡದ ಮುಖ್ಯಮಂತ್ರಿ ಎಂದು ಸಾರ್ವಜನಿಕರೆದುರು ಹೆಮ್ಮೆಯಿಂದ ಘೋಷಿಸಿದ್ದೇನೆ. ಆರು ಕೋಟಿ ಕನ್ನಡಿಗರ ಪ್ರತಿನಿಧಿಯಾಗಿ ಈಗಲೂ ಅದೇ ಮಾತನ್ನು ಪುನರುಚ್ಚರಿಸುತ್ತಿದ್ದೇನೆ. ಪರಿಷತ್ತಿನ ಸಂಶೋಧನ ವಿಭಾಗ ಮತ್ತು ನಿಘಂಟು ವಿಭಾಗಗಳ ಪುನರ್ರಚನೆಗೂ, ಪರಿಷತ್ತಿನ ಮಹತ್ವದ ನಡಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನೌಕರ ವರ್ಗಕ್ಕೆ ವೃಂದ ಮತ್ತು ನೇಮಕಾತಿ ನಿಯಮವನ್ನು ಅಳವಡಿಸುವುದಕ್ಕೂ, ಹೆಚ್ಚಿನ ಅನುದಾನ ಹಾಗೂ ಹೆಚ್ಚಿನ ಸಿಬ್ಬಂದಿ ನೇಮಕಾತಿಗೆ ಅನುಮೋದನೆ ನೀಡುವುದಕ್ಕೂ ಇದೇ ತೆರನಾದ ಸಹಾಯವನ್ನು ಸರ್ಕಾರದಿಂದ ಒದಗಿಸಿಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ನಾನು ಕಳಕಳಿಯಿಂದ ಬಿನ್ನವಿಸಿಕೊಳ್ಳುತ್ತೇನೆ. ೭೭ನೇ ಸಾಹಿತ್ಯ ಸಮ್ಮೇಳನದ ನೆನಪಿಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸುಸಜ್ಜಿತವಾದ ಸಾಹಿತ್ಯ ಭವನವೊಂದನ್ನು ನಿರ್ಮಾಣ ಮಾಡಿ, ಅದು ನಿರಂತರವಾಗಿ ಕನ್ನಡ ಚಟುವಟಿಕೆಗಳ ತಾಣವಾಗಿರುವಂತೆ ಮಾಡುವುದಕ್ಕಾಗಿ ೫ ಎಕರೆಯಷ್ಟು ಜಮೀನನ್ನು ಸಾಹಿತ್ಯ ಪರಿಷತ್ತಿಗೆ ಮಂಜೂರು ಮಾಡಬೇಕೆನ್ನುವ ಬೇಡಿಕೆಯನ್ನೂ ಮಾನ್ಯ ಮುಖ್ಯಮಂತ್ರಿಗಳಲ್ಲಿ ನಾನು ಇಡುತ್ತಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದಾದ ಕನ್ನಡ-ಕನ್ನಡ ಬೃಹನ್ನಿಘಂಟಿನ ಎಂಟು ಸಂಪುಟಗಳು ಅವು ಮೊದಲ ಬಾರಿಗೆ ಮುದ್ರಣವಾದ ಬಹಳ ವರ್ಷಗಳ ನಂತರ, ಅದರಲ್ಲೂ ಅದಕ್ಕಾಗಿ ದುಡಿದಿರುವ ಪ್ರಮುಖರೂ ನಿಘಂಟು ತಜ್ಞರೂ ಆಗಿರುವ ಜೀವಿಯವರು ಸಮ್ಮೇಳನಾಧ್ಯಕ್ಷರಾದ ಶುಭಸಂದರ್ಭದಲ್ಲಿ ಮರುಮುದ್ರಣಗೊಳ್ಳುತ್ತಿರುವುದು ಯೋಗಾಯೋಗವಷ್ಟೇ ಅಲ್ಲ, ನನ್ನ ಪಾಲಿನ ಭಾಗ್ಯವೂ ಆಗಿದೆಯೆಂದು ಭಾವಿಸುತ್ತೇನೆ.

ಸಾಹಿತ್ಯ ಪರಿಷತ್ತಿಗೆ ಆಧುನಿಕತೆಯನ್ನು ತರುವಲ್ಲಿ ನಾನು ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಪರಿಷತ್ತು ಬಹುಕಾಲದಿಂದ ನಡೆಸುತ್ತಿರುವ ಜಾನಪದ ಮತ್ತು ಶಾಸನ ಡಿಪ್ಲೊಮಾ ತರಗತಿಗಳು ನಾಡಿಗೆ ಜಾನಪದ ತಜ್ಞರನ್ನೂ ಶಾಸನತಜ್ಞರನ್ನೂ ಸಂಶೋಧಕರನ್ನೂ ಕೊಡುಗೆಯಾಗಿ ನೀಡುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಎಂ.ಫಿಲ್. ಮತ್ತು ಪಿಎಚ್.ಡಿ. ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ವಿಚಾರದಲ್ಲಿ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರವನ್ನು ಪರಿಷತ್ತಿನಲ್ಲಿ ನೆಲೆಗೊಳಿಸಬೇಕೆನ್ನುವ ನಮ್ಮ ಉತ್ಸಾಹಕ್ಕೆ ಕನ್ನಡ ವಿಶ್ವವಿದ್ಯಾಲಯ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸುವುದೆಂಬ ಆಸೆಯನ್ನಿರಿಸಿಕೊಂಡಿದ್ದೇನೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸದ್ಯದಲ್ಲೇ ಪತ್ರಿಕೋದ್ಯಮ ಡಿಪ್ಲೊಮಾ ಪ್ರಾರಂಭಿಸುತ್ತಿದ್ದೇವೆಂದು ತಿಳಿಸಲು ಸಂತೋಷವಾಗುತ್ತದೆ.

ಎಲ್ಲ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ವಿಚಾರದಲ್ಲಿ ತನ್ನ ಸಾರ್ವಭೌಮತೆಯನ್ನು ಎಂದೆಂದಿನಿಂದಲೂ ಉಳಿಸಿಕೊಂಡು ಬಂದಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿಯ ವಿಚಾರದಲ್ಲಿ ಕಾಲಕಾಲಕ್ಕೆ ತನ್ನ ನಿಲುವುಗಳನ್ನು ದಿಟ್ಟವಾಗಿ ಪ್ರತಿಪಾದಿಸುತ್ತ, ಅವುಗಳನ್ನು ಸಮರ್ಥಿಸಿಕೊಳ್ಳುತ್ತ ಬರುತ್ತಿದೆ. ಕನ್ನಡವನ್ನು ನಿರ್ಲಕ್ಷಿಸಿದಾಗ, ಕನ್ನಡತನಕ್ಕೆ ಅಗೌರವ ತೋರಿಸಿದಾಗ ಅದು ಉಗ್ರವಾಗಿ ಪ್ರತಿಭಟಿಸಿದೆ. ಹಂಪಿ ವಿಶ್ವವಿದ್ಯಾಲಯದ ಜಮೀನು ಪರಭಾರೆಯಂಥ ಸಂಗತಿಯಾಗಿರಬಹುದು, ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಸಂಗತಿಯಾಗಿರಬಹುದು ಆರೋಗ್ಯಕರ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುವ ಸಂದರ್ಭದಲ್ಲೆಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವನಿ ಕುಗ್ಗಿಲ್ಲವೆಂದೂ ಮುಂದೆಯೂ ಕುಗ್ಗುವುದಿಲ್ಲವೆಂದೂ ನಾಡಿನ ಮಹಾಜನತೆಯೆದುರು ತಿಳಿಸಲು ನಾನು ಹೆಮ್ಮೆಪಡುತ್ತೇನೆ.

ನಲವತ್ತು ವರ್ಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದೇವೆನ್ನುವ ಉತ್ಸಾಹ ಕ್ರಮೇಣ ಕರಗಿ ಏನಾಗುತ್ತದೋ ಹೇಗಾಗುತ್ತದೋ ಎನ್ನುವ ಗಾಬರಿಯಲ್ಲೂ ಗೊಂದಲದಲ್ಲೂ ಇದ್ದ ನನಗೆ ಮೊದಲಿನ ಭಯ, ಆತಂಕಗಳು ಕಳೆದಿವೆ. ನಿಮ್ಮೆಲ್ಲರ ಹಾರೈಕೆಯಿಂದ ಈ ಸಮ್ಮೇಳನ ಯಶಸ್ವಿಯಾಗಿ ನಡೆಯುತ್ತಿರುವುದನ್ನು ಕಂಡು ನನಗೆ ಸಂತೃಪ್ತಿಯಾಗಿದೆ, ಸಮಾಧಾನವಾಗಿದೆ. ಇದರ ಯಶಸ್ಸಿನಲ್ಲಿ ಪಾಲುದಾರರಾದ ಎಲ್ಲರನ್ನೂ ಅಭಿನಂದಿಸಿ, ಅಭಿವಂದಿಸಿ ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಎನ್ನುತ್ತ ನನ್ನ ನುಡಿಗೆ ವಿರಾಮ ಹಾಕುತ್ತೇನೆ.

ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ

No comments:

Post a Comment